ಪಾಳಯಗಾರ ಶಬ್ದದ ಸಾಧಾರಣಾರ್ಥ

ಪಾಳಯಗಾರ ಶಬ್ದದ ಸಾಧಾರಣಾರ್ಥ

ಒಂದೊಂದು ಚಿಕ್ಕ ಚಿಕ್ಕ ಪ್ರಾಂತಗಳಲ್ಲಿ ದೊಡ್ಡ ಪ್ರಮುಖರಾಗಿ ದೊರೆಗಳಂತೆ ಆಳಿಕೊಂಡು ಜನರಿಂದ ಕಂದಾಯ ಕಾಣಿಕೆ ಮೊದಲಾದ ವರಿಗಳನ್ನು ತೆಗೆದುಕೊಳ್ಳುತಾ ದುಷ್ಟರನ್ನು ನಿಗ್ರಹಿಸುತಾ ಶಿಷ್ಟರನ್ನು ಕಾಪಾಡುತಾ ಇದ್ದ ಮುಖಂಡರನ್ನು ಪಾಳಯಗಾರರು ಎಂಬ ಹೆಸರಿನಿಂದ ಕರೆಯುತಿದ್ದರು. ಆಯಾ ಸ್ಥಳದಲ್ಲಿ ಇವರಿಗೆ ಅಧೀನರಾದ ಜನರು ಇವರನ್ನು ದೊರೆಗಳು ಎಂತ ಕರೆಯುತ್ತಿದ್ದರು. ಇವರ ವಂಶೀಯರಿಗೆ ಈಗಲೂ ಆಯಾ ಪ್ರದೇಶಗಳಲ್ಲಿ ಗೌರವಾರ್ಥಕವಾಗಿ ದೊರೆಗಳು ಎಂಬುವುದೇ ರೂಢನಾಮವಾಗಿದೆ. ಆದರೆ ಈಚೀಚೆಗೆ ತಮಿಳು ದೇಶಗಳಲ್ಲಿ ಸಾಧಾರಣವಾಗಿ ಒಂದು ಟೋಪಿ ಎಂಬ ಕಿರೀಟವನ್ನು ಧರಿಸಿಕೊಂಡು ಬಂದ ಕರೀ ಸಾಹೇಬರಿಗೆಲ್ಲಾ ಈ ಗೌರವವಾದ ಬಿರುದು ಕೊಡಲ್ಪಟ್ಟಿದೆ. ನಮ್ಮ ಕನ್ನಡ ನಾಡುಗಳಲ್ಲಿ ಈ ಶಬ್ಬದ ಪ್ರಯೋಗವು ಅಷ್ಟು ನೈಚ್ಯವನ್ನು ಹೊಂದದೆ ‘ಪ್ರಸಿದ್ದ’ ಎಂಬ ಅರ್ಥವನ್ನೇ ಒಳ ಗೊಂಡಿದೆ. ಆದರೆ ದುಷ್ಟರಾಗಿದ್ದ ಕೆಲವು ಪಾಳಯಗಾರರು ಜನರಿಗೆ ಬಹಳವಾಗಿ ಹಿಂಸೆಮಾಡಿ ಮನಸ್ವಿ ಅವರಿಗೆ ಬಾಧೆಯನ್ನು ಕೊಡುತಾ, ಇತರರ ಮನೆಗಳನ್ನು ಊಟ ಮಾಡಿ ಅವರ ಆಸ್ತಿಯನ್ನು ದೋಚಿಕೊಂಡು ಹೆಂಗಸರಿಗೆ ಅನೇಕ ಅವಮಾನಗಳನ್ನು ಮಾಡುತ್ತಾ, ದಿಂಡೆಯಾಗಿದ್ದ ಕಾರಣ ಪಾಳಯಗಾರ ಎಂಬ ಶಬ್ದವು ದುಷ್ಟನಾದ ಪ್ರಮುಖ ಎಂಬದಾಗಿ ಪ್ರಯೋಗಿಸುವಷ್ಟು ನೀಚವಾದ ರೂಢಿಯನ್ನು ಸಹ ಒಳಗೊಂಡಿದೆ. “ಆ ಊರಲ್ಲಿ ಇವನು ಪಾಳಯಗಾರನಾಗಿದ್ದಾನೆ” ಎಂಬ ವಾಕ್ಯವು ಕೇವಲ ದುಷ್ಟರ ವಿಷಯದಲ್ಲಿ ಪ್ರಯೋಗವಿರತಕ್ಕದ್ದು ತಮಗಳಿಗೆ ಗೊತ್ತೆ ಇದೆ. ಇದು ಹೀಗಿರಲಿ. ಪಾಳೆಯಗಾರ ಎಂಬ ಶಬ್ದಕ್ಕೆ ನಿಜವಾದ ಅರ್ಥವನ್ನು ವಿಚಾರಮಾಡಿ ನೋಡೋಣ. ಸ್ವಲ್ಪ ಕಾಲ ಜನರು ತಂಗಿ ಇಳಿದುಕೊಳ್ಳುವ ಸ್ಥಳಕ್ಕೆ ಪಾಳಯವೆಂದು ಹೆಸರು.

(ಎ) ಪಾಳಯಗಾರರು ವಿಜಯ ನಗರಕ್ಕೆ ಆಧೀನ

ಚರಿತ್ರೆಗಳನ್ನು ಶೋಧಿಸಿ ನೋಡುವಲ್ಲಿ ವಿಜಯನಗರದ ಸಂಸ್ಥಾನವು ಪ್ರಬಲವಾದ ಸ್ಥಿತಿಯಲ್ಲಿದ್ದಾಗ ಜಿಯ ಈ ಶಬ್ದಪ್ರಯೋಗವು ರೂಢಿಗೆ ಬಂದಹಾಗೆ ತೋರಿಬರುತಿದೆ. ಅದಕ್ಕೆ ಹಿಂದೆ ಎಲ್ಲಿಯೂ ರೂಢಿಯಲ್ಲಿದ್ದ ಹಾಗೆ ತೋರಲಿಲ್ಲ. ಪಾಳೆಯಗಾರರೆಂಬ ಅಧಿಪತಿಗಳು ವಿಜಯನಗರದ ದೊರೆಗಳಿಗೆ ವಶವರ್ತಿಗಳಾಗಿ ಅವರಿಗೆ ಕಪ್ಪ ಮೊದಲಾದ್ದನ್ನು ಕೊಡುತಾ ಯುದ್ಧ ಪ್ರಸಕ್ತಿ ಬಂದಾಗಲೂ ಇತರ ಕಾಲಗಳಲ್ಲಿಯೂ ಅವರ ಸಹಾಯಕ್ಕೆ ತಮ್ಮ ದಂಡನ್ನು ಕಳುಹಿಸುತ್ತಾ ಇದ್ದರೆಂದು ಗೊತ್ತಾಗಿದೆ. ಇಂಥಾ ತಮ್ಮ ಸೇನೆಗಳೊಡನೆ ಈ ಮುಖಂಡರು ವಿಜಯನಗರದ ಮಹಾರಾಜರ ದರ್ಶನಕ್ಕೆ ಹೋಗಿ ರಾಜಧಾನಿಯ ಹೊರ ಭಾಗದಲ್ಲಿ ಇಳಿದುಕೊಂಡು ಗುನಗುಬಜಾರ ಸಮೇತವಾಗಿ ಪಾಳಯ ಹಾಕಿ ಇರುತಿದ್ದ ಕಾರಣ, ಆಯಾ ಪ್ರಮುಖರಿಗೆ ಪಾಳಯಗಾರರೆಂದು ಹೆಸರು ಬಂತೋ ; ಅಥವಾ ಈ ಪ್ರಮುಖರು ದೊಡ್ಡ ದೊಡ್ಡ ಪ್ರದೇಶಗಳನ್ನು ಆಕ್ರಮಿಸಿ ಅನುಕೂಲವಾದ ಒಂದುಕಡೆಯಲ್ಲಿ ಚಿಕ್ಕ ಊರಿನಂತೆ ಮಾಡಿಕೊಂಡು ಅಲ್ಲಿರುತಿದ್ದರಿಂದ ಅಂಥಾ ಊರುಗಳಿಗೆ ಅಥವಾ ಪಾಳಯಗಳಿಗೆ ಯಜಮಾನರಾದವರಿಗೆ ಪಾಳಯಗಾರರೆಂದು ರೂಢಿಯಾಯಿತೋ ; ಅಥವಾ ಒಂದು ಅನುಕೂಲವಾದ ಸ್ಥಳ ಗೊತ್ತಾಗಿ ಸಿಕ್ಕದೆ ಕಾಟಕಾಯಗಳು ಹೆಚ್ಚಾಗಿ ಶತ್ರುಗಳ ಬಾಧೆ ಅಧಿಕವಾಗಿದ್ದಾಗ ಸ್ವಲ್ಪ ಕಾಲ ದಂಡಿನೊಡನೆ ಪಾಳಯಕಟ್ಟಿ ಇಳಿದು ಕೊಳ್ಳುತ್ತಾ ಇದ್ದ ಪ್ರಬಲರಿಗೆ ಈ ಅಂಕಿತನಾಮವನಿಟ್ಟರೋ; ಅಥವಾ ವಿಜಯನಗರದ ಸಂಸ್ಥಾನದ ದಂಡು ಶತ್ರುಗಳ ಮೇಲೆ ಹೊರಟಾಗ ಈ ಪ್ರಭುಗಳು ತಮ್ಮ ದಂಡಿ ನೊಡನೆ ಅವರ ಸಹಾಯಕ್ಕೆ ಹೋಗಿ ಒಂದೊಂದು ಸ್ಥಳದಲ್ಲಿ ಇಳಿದು ಕೊಳ್ಳುತಿದ್ದರಿಂದ ಅವರಿಗೆ ಪಾಳಯಗಾರರೆಂದು ಅಭಿದಾನಾಯಿತೋ, ಖಂಡಿತವಾಗಿ ಯಾವ ಮೂಲವೂ ಗೊತ್ತಾಗಿಲ್ಲ. ಪಾಳೆಯಗಾರರೆಂಬ ಹೆಸರೇನೋ ರೂಢಿಗೆ ಬಂತು.

(ಬಿ) ವಿಜಯ ನಗರದವರು ಇವರನ್ನು ನೇಮಿಸಿದ್ದಲ್ಲ.

ವಿಜಯನಗರದ ಸಂಸ್ಥಾನದ ಏರ್ಪಾಡಿನಿಂದ ಈ ಪಾಳಯಗಾರ ಸಂಸ್ಥೆಯು ಈ ಹೆಸರನ್ನು ಹೊಂದಿ ಪ್ರಸಿದ್ಧಿಗೆ ಬಂತೆಂದು ತಿಳಿಯಬರುತ್ತಿದೆಯಷ್ಟೆ. ಆದರೆ ವಿಜಯನಗರದ ಸಂಸ್ಥಾನವು ಸ್ಥಾಪನೆ ಯಾದ್ದು ಕ್ರಿ. ಶ. ೧೩೩೫-೬ ರಲ್ಲಿ ಎಂದು ಚರಿತ್ರಕರ್ತರು ನಿಷ್ಕರ್ಷೆ ಮಾಡಿದಾರೆ. ಇಲ್ಲಿನ ಅರಸರ ಮೂಲವನ್ನು ವಿಚಾರಮಾಡುತ್ತಾ ಹೋದರೆ ಸಂಶಯವೆಂಬ ಸಮುದ್ರದಲ್ಲಿ ನಾನು ತೇಲಿ ಮುಳುಗುತಾ ಇರಬೇಕಾಗುವುದು. ಇದಕ್ಕೆ ಕೆಲವು ವರುಷಗಳ ಮುಂಚೆ ಗುಲಾಮಿ ಸಂತತಿಯ ದಿಳ್ಳೀಮುಸಲ್ಮಾನರು ಅಲ್ಲಾ ಉದೀನನ ಕಾಲದಲ್ಲಿ ಹಿಂದೂಸ್ಥಾನವನ್ನೆಲ್ಲಾ ಜೈಸುವುದಕ್ಕೆ ಹೊರಟರಷ್ಟೆ. ಪ್ರಬಲವಾದ ಇವರ ಹಾವಳಿಯಲ್ಲಿ, ಈಗ ಹೈದರಾಬಾದು ಪ್ರಾಂತಕ್ಕೆ ಸೇರಿರುವ ಓರಗಲ್ಲು ಸಂಸ್ಥಾನವು ಅನ್ಯದೇಶೀಯರ ವಶವಾಯಿತು. ಅಲ್ಲಿದ್ದ ತೆಲಗುರಾಜರ ವಂಶೀಯರು ಕೆಲವರು ದಕ್ಷಿಣಕ್ಕೆ ಓಡಿಬಂದರು. ಇವರು ಆನೆಗೊಂದಿಯನ್ನು ಸೇರಿ ಬ್ರಾಹ್ಮಣರಾದ ಮಾಧವಾಚಾರ್‍ಯರೆಂಬ ಮಹಾಮಂತ್ರಿಯ ಸಹಾಯದಿಂದ ವಿಜಯನಗರವನ್ನು ಸ್ಥಾಪನೆಮಾಡಿದ ಹಾಗೆ ಸೂಚನೆ ಇದೆ. ಎಂತಾದರೂ ಇರಲಿ. ಈ ವಿಜಯನಗರದ ರಾಜರೇ ಮೊಟ್ಟ ಮೊದಲು ಈ ಸಂಸ್ಥೆಯನ್ನು ಏರ್ಪಡಿಸಿದ್ದರೆ ಅದು ೧೩೩೫-೬ ಕ್ಕೆ ಮುಂಚೆ ಇರಲಾರದು ಎಂದು ಹೇಳ ಬೇಕಾಗುವುದು.

ಕೆಲವು ಪಾಳಯಗಾರರು ಮುಂಚಿನಿಂದ ಇದ್ದರು.

ಆದರೆ ಗುಮ್ಮ ನಾಯಕನ ಪಾಳಯದ ಚರಿತ್ರೆಯನ್ನು ನೋಡುವಲ್ಲಿ, ಮದನಪಲ್ಲಿ ತಾಲ್ಲೂಕು ದೊಡ್ಡಪಾಳ್ಯದಲ್ಲಿ, ಒಬ್ಬ ಪ್ರಮುಖನು ಅಧಿಪತಿಯಾಗಿದ್ದನು. ಈತನ ತಮ್ಮಂದಿರಾದ ನಾರಸಿಂಹನಾಯಕ, ಖಾದ್ರಿಪತಿನಾಯಕ ಇವರಿಬ್ಬರೂ ಸೇರಿ ಪೂರ್‍ವದ ರಾಜ್ಯವನ್ನು ತಮ್ಮಣ್ಣನಿಗೆ ಬಿಟ್ಟು ತಾವು ಹೊಸದಾಗಿ ಸೀಮೆಯನ್ನು ಸಂಪಾದಿಸಬೇಕೆಂದು ಶಾ||ವಾ|| ಶ. ೧೧೬೫ ನೇ ಶುಭಕೃತು ಸಂವತ್ಸರದಲ್ಲಿ ಹೊರಟರು. ಈ ವರುಷವು ಕ್ರಿ. ಶ. ೧೨೪೩ ಕ್ಕೆ ಸರಿಹೋಗುವುದು. ಈ ಹೆಗ್ಗಡಿಗಳ ವಂಶವು ಮುಂದೆ ಸಾಗುತಾ ಹೋಯಿತು. ಆದರೆ ಮೇಲಿನ ಸಂಗತಿಯನ್ನು ಶೋಧಿಸಿ ನೋಡಿದರೆ ಕ್ರಿ. ಶ. ೧೨೪೩ ಕ್ಕೆ ಮುಂಚಿನಿಂದಲೂ ಇವರ ವಂಶ ನಡೆಯುತಾ ಬಂದಹಾಗೆ ತೋರುವುದು. ಕ್ರಿ. ೧೩೩೬ ರಲ್ಲಿ ವಿಜಯನಗರದ ಸಂಸ್ಥಾನ ಸ್ಥಾಪನೆಯಾದ್ದರಿಂದ ಇದಕ್ಕೆ ೯೨ ವರುಷಗಳಿಗೆ ಮುಂಚೆಯೇ ಈ ಪ್ರಮುಖರಾದ ಪಾಳಯಗಾರ ಅಧಿಕಾರಿಗಳು ಅನೇಕರು ಇದ್ದಂತೆ ಸ್ಪಷ್ಟವಾಗುವುದು.

ಆಳಿದ ರಾಜರ ವಿಷಯವಾದ ಕಾರಣ.

ಇದೂ ಅಲ್ಲದೆ ವಿಜಯನಗರದಲ್ಲಿ ಆಳಿದ ಮೊದಲನೇ ಸಂತತಿಗೆ ಮೂಲಪುರುಷನು ಸಂಗಮರಾಯ. ಈ ಸಂಗಮನ ಹಿರಿಮಗ ೧ನೇ ಹರಿಹರ. ಇವನು
ಕ್ರಿ. ಶ. ೧೩೩೬ ರರಿಂದ ೧೩೫೪ ರ ವರೆಗೆ ಆಳಿದನು. ಇವನ ತರುವಾಯ ಇವನ ತಮ್ಮ ೧ನೇ ಬುಕ್ಕನಿಗೆ ೧೩೫೪ ರಲ್ಲಿ ಪಟ್ಟವಾಯಿತು. ಸಂಗಮನ ತಂದೆಯ ಹೆಸರು ಬುಕ್ಕನೆಂತಲೇ. ಇವನಿಗೆ ಎಲ್ಲಿಯೂ ದೊರೆತನವಿದ್ದ ಹಾಗೆ ತಿಳಿಯಬಂದಿಲ್ಲ. ಆದ್ದರಿಂದ ಗುಮ್ಮ ನಾಯಕನ ಪಾಳಯದ ಚರಿತ್ರೆಯಲ್ಲಿ ದಂಡೆತ್ತಿ ಬಂದಂತೆ ಸೂಚಿಸಿರುವ ಬುಕ್ಕರಾಯನು ೧ ನೇ ಹರಿಹರನ ೨ನೇ ತಮ್ಮನಾದ ೧ ನೇ ಬುಕ್ಕರಾಯನೇ ಆಗಿರಬೇಕು. ಇವನು ಕ್ರಿ. ೧೩೫೪ ರಲ್ಲಿ ದೊರೆಯಾದ್ದೇನೋ ನಿಜ. ಅದಕ್ಕೆ ಮುಂಚಿನಿಂದ ದೇಶಗಳನ್ನು ಜೈಸುತಾ ಕಡೆಗೆ ಖ್ಯಾತಿಪಡೆದು ವಿಜಯನಗರದಲ್ಲಿ ೧೩೩೬ ರಲ್ಲಿ ಈ ಜನ ದೊರೆಯಾದರು. ೧ ನೇ ಹರಿಹರನ ಆಳಿಕೆಯಲ್ಲಿ ದೊರೆಯ ತಮ್ಮನಾದ ೧ನೇ ಬುಕ್ಕನು ವಿಶೇಷ ಸಮರ್ಥನಾದ್ದರಿಂದ ಅವನಿಗೆ ಯುವರಾಜ ಪದವಿಯನ್ನು ಕೊಟ್ಟಿದ್ದರು. ಇವನೂ ಇವನ ತಮ್ಮಂದಿರು ಮಾರಪ್ಪ ಮುದ್ದಪ್ಪ ಎಂಬುವರೂ ಸೇನಾನಾಯಕರಾಗಿ ನೇಮಕವಾದ ಹಾಗೂ ಇವರು ದಿಗ್ದೇಶಗಳನ್ನು ಜೈಸಲು ಹೊರಟಹಾಗೂ ತಿಳಿಯಬಂದಿದೆ. ಇವರುಗಳಲ್ಲಿ ಸಮರ್ಥನಾದ ಬುಕ್ಕನು ಯುವರಾಜನಾಗಿದ್ದದೂ ಅಲ್ಲದೆ ದಳವಾಯಿಯಾಗಿಯೂ ಇದ್ದ ಹಾಗೆ ಕಂಡುಬರುವುದು. ಬುಕ್ಕರಾಯನ ದಂಡು ಬಂತೆಂದು ಗುಮ್ಮ ನಾಯಕನ ಪಾಳಯದ ಚರಿತ್ರೆಯಲ್ಲಿದೆ. ಇವರು ಕಡಪ, ನೆಲ್ಲೂರು ಮೊದಲಾದ ಪ್ರದೇಶಗಳನ್ನು ಜೈಸಿದರು. ಇಂಥಾ ವಿಜಯ ಯಾತ್ರೆಯಲ್ಲಿ ಮಗ್ಗಲಸೀಮೆಯಾದ ಗುಮ್ಮನಾಯಕನ ಪಾಳಯದವರ ಮೇಲೂ ಇವರು ಕೈ ಮಾಡಿರಬಹುದೆನ್ನುವುದಕ್ಕೆ ಅನುಮಾನವಿಲ್ಲ. ಈ ಜಯವನ್ನು ಬುಕ್ಕನು ದಳಪತಿಯಾಗಿ ಹೊಂದಿರ ಬಹುದಲ್ಲದೆ ದೊರೆಯಾಗಿದ್ದು ಕೊಂಡು ಹೊಂದಿದ ಹಾಗೆ ಕಾಣುವುದಿಲ್ಲ, ಅದುವರೆಗೆ ಹರಿಹರನ ಅಧಿಕಾರ ಸ್ಥಿರವಾಗಿಯೇ ಇರಲಿಲ್ಲ. ಇಂಥವರು ಪಾಳಯಗಾರರ ಸಂಸ್ಥೆಯನ್ನು ಏರ್ಪಡಿಸಲು ಅಧಿಕಾರವೆಲ್ಲಿಂದ ಬಂತು ?

ಗುಮ್ಮ ನಾಯಕನ ಪಾಳಯದ ದಾಖಲೆ

ಮೇಲಾಗಿ ಆ ಕಾಲದಲ್ಲಿ ಗುಮ್ಮನಾಯಕನ ಪಾಳಯದಲ್ಲಿ ನಾಲ್ಕನೇ ತಲೆಯ ಪಾಳೆಯಗಾರ ಗುಮ್ಮ ನಾಯಕನು ಆಳುತ್ತಿದ್ದಾಗ ಮೇಲ್ಕಂಡ ಬುಕ್ಕರಾಯನು ಈ ಪಾಳಯಪಟ್ಟನ ಸೀಮೆಯನ್ನು ಜೈಸಿ ಸ್ವಾಧೀನ ಮಾಡಿಕೊಳ್ಳಲು ಬಂದನು. ಗುಮ್ಮನಾಯಕನು ವಿಜಯನಗರದ ಅರಸರಿಗೆ ಪೊಗದಿಯನ್ನು ಕೊಡುತ್ತಾ ತನ್ನ ಸೇನೆಯನ್ನು ಅವರ ಸಹಾಯಕ್ಕೆ ಕಳುಹಿಸುತ್ತಾ ಅವರಿಗೆ ವಶವರ್ತಿಯಾಗಿರುವಂತೆ ಒಪ್ಪಿ ಕೌಲು ಮಾಡಿ ಕೊಂಡನು. ಈ ಒಪ್ಪಂದ ನಡೆದದ್ದು ಇಂಥಾ ಸಂವತ್ಸರದಲ್ಲಿಯೇ ಎಂದು ನನಗೆ ದೊರೆತ ಪುರಾತನ ಲೇಖನಗಳಿಂದ ತಿಳಿದುಬರಲಿಲ್ಲ. ಆದರೆ ಮೇಲೆ ಕಂಡ ಪಾಳಯಗಾರ ಗುಮ್ಮ ನಾಯಕನು ಕ್ರಿ. ೧೨೯೬ ನೇ ಮನ್ಮಥ ಸಂ|| ದಿಂದ ೧೮ ವರುಷ ಆಳಿ ಕ್ರಿ|| ೧೩೧೪ ನೇ ಪ್ರಮಾದೀಚ ಸಂ|| ದ ಜ್ಯೇಷ್ಠ ಮಾಸದಲ್ಲಿ ಮೃತಪಟ್ಟ ಹಾಗೆ ತಿಳಿಯಬಂದಿದೆ. ಆದಕಾರಣ ಬುಕ್ಕರಾಯನ ಸೇನೆಯು ಈ ಸೀಮೆಗೆ ಮುತ್ತಿಗೆ ಹಾಕಿದ್ದು ಮೇಲೆ ಹೇಳಿದ ೧೮ ವರುಷದೊಳಗಾಗಿ ನಡೆದಿರಬೇಕು. ಆಗ ಎಂದರೆ ಕ್ರಿ|| ೧೩೧೪ ನೇ ಪ್ರವಾದೀಚ ಸಂ|| ದ ವರೆಗೆ ವಿಜಯನಗರದಲ್ಲಿ ನರಪತಿ ರಾಜರ ಸಂಸ್ಥಾನ ಇನ್ನೂ ಸ್ಥಾಪನೆಯೇ ಆಗಿರಲಿಲ್ಲವೆಂದು ತೋರಿಬರುವುದು. ಅದುವರೆಗೆ ಗುಮ್ಮ ನಾಯಕನ ಪಾಳ್ಯದ ದೊರೆಗಳ ವಂಶದಲ್ಲಿ ನಾಲ್ಕು ತಲೆ ಕಳೆದುಹೋಗಿತ್ತು. ಹೀಗೆ ಇನ್ನೂ ತನ್ನ ಬುಡವನ್ನು ಭದ್ರಮಾಡಿಕೊಂಡು ವಿಜಯನಗರದಲ್ಲಿ ರೂಢಮೂಲರಾಗುವುದಕ್ಕೆ ಮುಂಚೆಯೇ ತಮ್ಮ ರಾಜ್ಯದಲ್ಲೆಲ್ಲಾ ಪಾಳಯಗಾರರನ್ನು ಎರ್ಪಡಿಸಿ ತಾವು ಚಕ್ರವರ್ತಿಗಳೆಂದು ಹೊಗಳಿಸಿಕೊಂಡರೆಂಬದಾಗಿ ಹೇಳಿದರೆ ಅಸಂಭವವಾಗುವುದು. ಆದಕಾರಣ ವಿಜಯನಗರದ ಸಂಸ್ಥಾನದವರು ಮೊಟ್ಟ ಮೊದಲು ಪಾಳಯಗಾರರ ಸಂಸ್ಥೆಯನ್ನು ಏರ್ಪಡಿಸಿದರೆಂಬ ಅಂಶ ಸಂಶಯಾಸ್ಪದವಾಗಿದೆ.

(ಸಿ) ಇತರ ಅಧಿರಾಜರಿಗೆ ಅಧೀನರಾಗಿದ್ದವರು ಪಾಳಯಗಾರರೇ

ಇಲ್ಲಿ ಅರಿಕೆ ಮಾಡಬೇಕಾದ ಇನ್ನೊಂದು ವಿಷಯವಿದೆ. ಪುರಾತನ ಕಾಲದಲ್ಲಿ ಈ ಕರ್ಣಾಟಕ ರಾಜ್ಯವು ಆಗಾಗ್ಗೆ ಕೃಷ್ಣಾ ಮತ್ತು ಗೋದಾವರೀ ನದಿಗಳಿಗೆ ಉತ್ತರ ದಿಕ್ಕಿನಲ್ಲಿರುವ ಪ್ರಾಂತಗಳಿಂದ ಕನ್ಯಾಕುಮಾರಿವರೆಗೂ ವ್ಯಾಪಿಸುತ್ತಾ ಇದ್ದ ಹಾಗೆ ತಿಳಿಯಬರುವುದು. ಈ ದೊಡ್ಡ ವಿಸ್ತಾರವಾದ ಪ್ರದೇಶದಲ್ಲಿ ಹಿಂದಕ್ಕೆ ಗಂಗರಾಜರು, ತರುವಾಯ ಪಲ್ಲವರು, ಚಾಳುಕ್ಯರು, ಹೊಯಿಸಳ ಬಲ್ಲಾಳರು, ರಾಷ್ಟ್ರ ಕೂಟರು, ಕಾಲಭೂರ್‍ಯರು, ಇವರೇ ಮೊದಲಾದ ರಾಜವಂಶದ ದೊರೆಗಳು ಆಳುತಿದ್ದರು. ಈ ಸರಣಿಯಲ್ಲಿ ವಿಜಯನಗರದವರೇ ಕೊನೆಯವರಾಗಿದಾರೆ. ಈ ವಂಶದ ರಾಜರುಗಳೆಲ್ಲಾ ಚಕ್ರವರ್ತಿಗಳೆಂತಲೇ ಹೋಗಳಿಸಿಕೊಂಡಿದ್ದಾರೆ. ಇವರಲ್ಲಿ ಪುಲಕೇಶಿ ಮೊದಲಾದ ದೊರೆಗಳು ರಾಜಸೂಯಾಗವನ್ನೂ ಕೂಡ ಮಾಡಿ ಚಕ್ರಾಧಿಪತಿಗಳಾಗಿದ್ದಾರೆ. ಇವರುಗಳು ಹೀಗೆ ಚಕ್ರಾಧೀಶ್ವರರೆಂದು ಬಿರುದನ್ನು ಹೊಂದಬೇಕಾದರೆ, ಇವರಿಗೆ ಅಧೀನ ರಾಜರು ಅನೇಕರು ಇದ್ದೆ ಇರಬೇಕು. ಅಂಥಾ ಅಧೀನ ರಾಜರು ಈ ಪಾಳಯಗಾರಲ್ಲದೆ ಬೇರೆ ಯಾರು ಯಾರು, ಅವರುಗಳು ಎಲ್ಲೆಲ್ಲಿದ್ದರು, ಎನ್ನುವುದು ಎಲ್ಲಿಯೂ ವಿವರಿಸಲ್ಪಟ್ಟಿಲ್ಲ. ಆದರೆ ಅಂಥಾ ಮಹಾರಾಜರ ಅಧೀನದಲ್ಲಿ ಇತರ ಚಿಕ್ಕ ದೊರೆಗಳು ಯಾರೂ ಇಲ್ಲದಿದ್ದರೆ ಅವರು ಅಧಿರಾಜರು ಎಂತಲೂ, ಚಕ್ರವರ್ತಿಗಳು ಎಂತಲೂ ಹೊಗಳಿಸಿಕೊಳ್ಳುವುದಕ್ಕೆ ಆಗಲಾರದು.

ಈ ಸಂದರ್ಭವನ್ನೂ ಮತ್ತು ವಿಜಯನಗರದ ಸಂಸ್ಥಾನ ಸ್ಥಾಪನೆ ಯಾಗುವುದಕ್ಕೆ ಸುಮಾರು ಒಂದು ಶತಮಾನಕ್ಕೆ ಮುಂಚೆ ಗುಮ್ಮ ನಾಯಕನ ಪಾಳಯದ ಪಾಳೆಯಗಾರರೂ ಇತರ ಚಿಕ್ಕ ಪಾಳೆಯಗಾರರೂ ಅಲ್ಲಲ್ಲಿ ಆಳಿಕೊಂಡಿದ್ದದನ್ನೂ ಕಲೆಯಿಸಿಕೊಂಡು ಯೋಚಿಸಿದರೆ, ಅನೇಕಜನ ಚಿಕ್ಕ ಚಿಕ್ಕ ಸಾಮಂತ ರಾಜರು ಅಲ್ಲಲ್ಲಿ ಸಣ್ಣ ಸಣ್ಣ ಪ್ರಾಂತಗಳಿಗೆ ಅರಸರೆನ್ನಿಸಿಕೊಂಡು ಆಳುತ್ತಿದ್ದರೆಂತಲೂ, ಅವರುಗಳನ್ನು ಪ್ರಬಲರಾದ ಮಹಾರಾಜರು ಜೈಸಿ ರಾಜಾಧಿರಾಜರೆನ್ನಿಸಿಕೊಂಡರೆಂತಲೂ, ಅಂಥಾ ಸಾಮಂತ ನರಪತಿಗಳೇ ಪಾಳಯಗಾರರೆಂಬ ಹೆಸರಿನಿಂದ ವಿಜಯನಗರದ ಸಂಸ್ಥಾನ ಸ್ಥಾಪನೆಯಾಗುವುದಕ್ಕೆ ಮುಂಚೆ ನಿಂದಲೂ ದಕ್ಷಿಣ ದೇಶದಲ್ಲಿರಲೇಬೇಕೆಂತಲೂ ನಿರ್ಧರ ಮಾಡಬೇಕಾಗುವುದು. ವಿಜಯನಗರದವರು ಈ ಕ್ರಮ ಅನುಸರಿಸಿ ನೇಮಿಸಿದವರಿಗೂ ಈ ಹೆಸರನ್ನೇ ಇಟ್ಟಿರಬಹುದು.

(ಡಿ) ಇಂಥಾ ಅಧೀನರಾಜರು ಉತರದಲ್ಲಿಯೂ ಇದ್ದರು.

ಇಂಥಾ ಅಧೀನ ರಾಜರು ದಕ್ಷಿಣ ದೇಶದಲ್ಲಿ ಇದ್ದದಲ್ಲದೆ ಉತ್ತರ ದೇಶದಲ್ಲಿಯೂ ಹೇರಳವಾಗಿ ಇದ್ದರೇ? ವಿಚಾರ ಮಾಡಿ ನೋಡೋಣ. ಭೂಮಿಯ ಸ್ವಾಮ್ಯವನ್ನು ಕುರಿತು ಕಕ್ಷಿಣ ದೇಶದಲ್ಲಿ ಇರುವ ರೈತವಾರ್ ಸಿಸ್ತು ಪೂರ್‍ವದಲ್ಲಿ ವಿಶೇಷವಾಗಿರಲಿಲ್ಲ. ಅಲ್ಲಿದ್ದ ಪೂರ್‍ವ ಪದ್ಧತಿಗಳನ್ನು ಬದಲಾಯಿಸಲು ಹುಟ್ಟಿದ ಹಲವು ಅವಾಂತರಗಳನ್ನು ಮುಂದೆ ವಿವರಿಸುತ್ತೇನೆ. ಈ ಅಂಶದಲ್ಲಿ ಇಷ್ಟೊಂದು ಬದಲಾವಣೆಯು ಉತ್ತರ ದೇಶದಲ್ಲಿ ಆಗಲಿಲ್ಲ. ದಕ್ಷಿಣಕ್ಕಿಂತಲೂ ಉತ್ತರದಲ್ಲಿ ಮುಸಲ್ಮಾನರ ಪ್ರಾಬಲ್ಯ ಹೆಚ್ಚಾಗಿತ್ತು. ಅವರು ದೇಶವನ್ನು ಜೈಸಿ ಸ್ವಾಧೀನ ಮಾಡಿಕೊಂಡು ಆಳುತಿದ್ದರೆಂದರೆ, ಊರುಗಳನ್ನು ಹಿಡಿದರು, ಸಿಕ್ಕಿದ ಜನರನ್ನು ಕೊಂದರು, ಕೊಳ್ಳೇಮಾಡಿದರು, ಬೇಕಾದ್ದನ್ನು ತೆಗೆದುಕೊಂಡು ಹೋದರು, ವಿಶೇಷವಾಗಿ ಸೇನೆಯನ್ನು ಕಟ್ಟಿದರು, ತಮ್ಮ ಪದವಿಯ ಅಟ್ಟಹಾಸವನ್ನು ತೋರಿಸಿದರು, ಇದ್ದ ಕಟ್ಟಡಗಳನ್ನು ಮುರಿದರು, ಬೇರೇ ಕಟ್ಟಡಗಳನ್ನು ಕಟ್ಟಿದರು, ಅನೇಕ ಸ್ತ್ರೀಯರಿಗೆ ಮಾನಭಂಗ ಮಾಡಿದರು, ಬೇಕಾದ ಆಹಾರಗಳನ್ನು ತಿಂದು ಪೇಯಗಳನ್ನು ಕುಡಿದು ಆನಂದವಾಗಿದ್ದರು, “ಖಾನ ಖಲಾನ ಪೀನ ಪಿಲಾನ” ಎಂದುಕೊಂಡು ಇದ್ದರು- ಎಂದು ಅರ್ಥವಾಗುವುದೇ ಹೊರತು, ಜನರ ಕ್ಷೇಮಕ್ಕೂ ಸಾರ್‍ಕಾರದ ಆದಾಯಕ್ಕೂ ಅನುಕೂಲವಾದ ಮಹಾಕಾರ್‍ಯಗಳನ್ನು ನಿರ್ವಹಿಸಿದರೆಂದು ಧಾರಾಳವಾಗಿ ನಿರ್ಧರಿಸತಕ್ಕದ್ದು ಕಷ್ಟವಾದ ಕೆಲಸವಾಗುವುದು. ಹೀಗಿದ್ದಾಗ್ಯೂ ಗುಲ್ ಬರ್ಗಾ ಸಂಸ್ಥಾನದಲ್ಲಿದ್ದ ಮಹಮೂದ್ ಗವಾನನೂ, ಉತ್ತರದಲ್ಲಿ ಚಕ್ರವರ್ತಿಯಾದ ಫಿರೋಜ್ ತೊಗಲಕ, ಮೊಗಲಾಯರ ಎರಡನೇ ದೊರೆಯಾದ ಹುಮಾಯೂನನನ್ನು ಈ ದೇಶದಿಂದ ಓಡಿಸಿ ತಾನೇ ದಿಳ್ಳಿಯಲ್ಲಿ ಚಕ್ರವರ್ತಿಯಾಗಿದ್ದ ಪೇರ್‌ಖನ್ ಸೂರನೂ, ಅಕ್ಬರ್‌ಪಾದಷಹನಲ್ಲಿ ಸುವರ್ಣಾದಾಯದ ಬಾಬಿಗೆ ಮಂತ್ರಿಯಾಗಿದ್ದ ರಾಜಾ ತೋದ‌ರ್‌ಮುಲ್ ಎಂಬಾತನೂ, ಈ ಮಂತ್ರಿಗಳು ಸಾರ್‍ಕಾರದ ಆದಾಯವನ್ನು ಕ್ರಮಪಡಿಸುವುದಕ್ಕೆ ಅಗತ್ಯವಾದ ಏರ್ಪಾಡುಗಳನ್ನು ಸ್ವಲ್ಪಮಟ್ಟಿಗೆ ಮಾಡಿದರು. ಆದರೆ ಇವರೂ ಕೂಡ ಈ ದೇಶದಲ್ಲಿ ಪೂರ್‍ವದಿಂದಲೂ ಇದ್ದ ಪದ್ಧತಿಯನ್ನು ಕೆಡಿಸಲಿಲ್ಲ. ಮೊದಲು ಈ ರಾಜ್ಯದಲ್ಲಿ ವಾಡಿಕೆಯಾಗಿದ್ದ ಶಿಸ್ತನ್ನೂ ಆಚರಣೆಯನ್ನೂ ಇಟ್ಟು ಕೊಂಡು ಅದರಮೇಲೆ ಕಾಲೋಚಿತವಾಗಿ ತಮಗೆ ತೋರಿದ ಏರ್ಪಾಡನ್ನು ಮಾಡಿದರು. ಪೂರ್‍ವದಿಂದಲೂ ಭೂಸ್ವಾಮ್ಯವನ್ನು ಸ್ವತಂತ್ರವಾಗಿ ಅನುಭವಿಸುತ್ತಾ ಇದ್ದ ಮುಖಂಡರು ಪ್ರತ್ಯೇಕ ಪ್ರತ್ಯೇಕವಾಗಿ ತಮ್ಮ ಹಕ್ಕನ್ನು ಅನುಭವಿಸುತ್ತಾ ಇದ್ದರು. ಇಂಥವರು ಯಾರು ಯಾರು ಅವರುಗಳ ಹಕ್ಕಿನ ಸ್ವಭಾವ ಎಂಥಾದ್ದು ಅದನ್ನು ಕೂಡಿದ ಮಟ್ಟಿಗೂ ಇಲ್ಲಿ ವಿವರಿಸಬೇಕಾದ್ದು ಅಗತ್ಯವೆಂದು ತೋರುತಿದೆ; ಹೇಗೆಂದರೆ :
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು ಭವ್ಯವಾಗಲಿ
Next post ಭಾವನ ಭಾವನ ಚೇತನ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys